19.5 C
Karnataka
Friday, November 22, 2024

    WFH ನಂತರ ಮೊದಲ ದಿನ ಆಫೀಸ್ ನಲ್ಲಿ

    Must read

    ಕಳೆದ ಮಾರ್ಚ್ ರಂದು  ದೇಶದ  ಪ್ರಧಾನ ಮಂತ್ರಿಗಳು ಭಾನುವಾರ ಸಂಪೂರ್ಣ ಲಾಕ್ ಡೌನ್   ಮಾಡಿ, ಸಂಜೆ ಎಲ್ಲರೂ ತಮ್ಮ ತಮ್ಮ ಮಹಡಿಗಳಲ್ಲಿ ಚಪ್ಪಾಳೆ ತಟ್ಟುವ ಮೂಲಕ  ವೈದ್ಯರಿಗೆ ಹಾಗೂ ಹೆಲ್ತ್ ವಾರಿಯರ್ಸ್  ಗೆ  ಬೆಂಬಲ ಸೂಚಿಸಿ ಎಂದು ಹೇಳಿದ ದಿನದಿಂದಲೇ IT  ಕೆಲಸ ಮಾಡುವವರು, ವರ್ಕ್ ಫ್ರಮ್ ಹೋಮ್-WFH- ಮಾಡಲು ಪ್ರಾರಂಭ ಮಾಡಿದ್ದರು. 

    ತರಾತುರಿಯಲ್ಲಿ WFH  ಕೆಲಸ ಶುರು ಮಾಡಿದ್ದರಿಂದ ಕೆಲವರು ತಮ್ಮ ತಮ್ಮ ಡೆಸ್ಕ್ ಹತ್ತಿರ ಇಟ್ಟ ವಸ್ತುಗಳು ಹಾಗೇ ಬಿಟ್ಟು ಬಂದರು. ಕೆಲಸ ಮಾಡುವ ಕಂಪನಿಗಳು “ಮುಂದಿನ ಸುತ್ತೋಲೆ ಕೊಡುವ ವರೆಗೆ” ಎಲ್ಲರೂ ಮನೆಯಿಂದಲೇ ಕೆಲಸ ಮಾಡಬೇಕು ಹಾಗೂ ಯಾವುದೇ ರೀತಿಯಲ್ಲಿ ಆಫೀಸ್ ಬರುವುದು ಹಾಗು ಅಲ್ಲಿರುವ ವಸ್ತುಗಳನ್ನ ತೆಗೆದುಕೊಂಡು ಹೋಗುವಂತಿಲ್ಲ ಎಂದು ಹೇಳಿಬಿಟ್ಟಿದ್ದರು. ಜೊತೆಯಲ್ಲಿ ಯಾರಿಗೆ Laptop  ಇರಲಿಲ್ಲವೋ ಅವರ ಮನೆಬಾಗಿಲಿಗೆ laptop ತಲುಪಿಸುವ ವ್ಯವಸ್ಥೆ ಮಾಡಿದ್ದರು. 

    ಆರಂಭದಲ್ಲಿ ತುಂಬಾ ಖುಷಿಯಿಂದಲೇ  WFH ಶುರು ಮಾಡಿದ್ದಕ್ಕೆ ಹಲವಾರು  ಕಾರಣಗಳಿತ್ತು. ಜೀವನ, ಸಮಯದ ಚಕ್ರದ ಜೊತೆ ಮುಂಜಾನೆ ಓಡಲು ಶುರುಮಾಡಿದರೆ ರಾತ್ರಿ ಹನ್ನೆರೆಡು ಹೊಡೆದರೂ ನಿಲ್ಲುತ್ತಿರಲಿಲ್ಲ.  ತರಾತುರಿಯಲ್ಲಿ ಮುಂಜಾವಿನ ವಾಕಿಂಗ್, ಕಾಫೀ, ಸ್ನಾನ  ದೇವರಿಗೆ ಒಂದ್ ನಮಸ್ಕಾರ ಹಾಕಿ,ಮಕ್ಕಳನ್ನ ಶಾಲೆಗೋ, ಡೇ ಕೇರ್ ಗೋ ಬಿಟ್ಟು, ಅಮ್ಮ, ಹೆಂಡ್ತಿ ಕೊಟ್ಟ ತಿಂಡಿ ರಸ್ತೆಗಳಲ್ಲಿನ ಟ್ರಾಫಿಕ್ ಬಗ್ಗೆ ಗೊಣಗಾಡುತ್ತಾ  ಅವಸರದಲ್ಲೇ ತಿಂದು  ಬೆನ್ನಿಗೆ ಬ್ಯಾಗ್ ಹಾಕಿ ಊಟದ ಚೀಲ ಹಿಡಿದು ಬೈಕ್, ಬಸ್ ಅಥವಾ ಕ್ಯಾಬ್ ಹತ್ತುವಷ್ಟರಲ್ಲಿ ಬೆವರು ಕಿತ್ತುತ್ತಿತ್ತು.  ಮೇಲೆ ಹೇಳಿದ್ದ ಕೆಲಸ ಒಂದು ತೂಕವಾದರೆ  ರಸ್ತೆಗಳಲ್ಲಿನ ಟ್ರಾಫಿಕ್ ದಾಟಿ ಆಫೀಸ್ ಮುಟ್ಟುವುದೇ ಮತ್ತೊಂದು ತೂಕ ಹಾಗು ಪ್ರಯಾಸದಾಯಕವಾಗಿತ್ತು. ಎಷ್ಟೇ  9 ಗಂಟೆಯೊಳಗೆ ಆಫೀಸ್ ಸೇರಬೇಕು ಎಂದು ಕೊಂಡಿದ್ದರು ದಿನನಿತ್ಯ ಒಂದಲ್ಲಾ ಒಂದು ಕಾರಣದಿಂದ ಅರ್ಧ ಗಂಟೆ ತಡವಾಗೇ ಆಫೀಸ್ ಸೇರಿ ಸಮಯ ಸರಿದೂಗಿಸಲು ಸಂಜೆ ಹೆಚ್ಚು ಹೊತ್ತು ಕೆಲಸ ಮಾಡಿ, ಮತ್ತೆ ಅದೇ ರಾಗ ಅದೇ ಕಥೆ  ಮನೆ ಸೇರುವುದರಲ್ಲಿ ತಡರಾತ್ರಿ ಯಾಗಿರುತ್ತಿತ್ತು. 

    ವರ್ಕಿಂಗ್ ವಿಮೆನ್, ಸಿಂಗಲ್ ಪೇರೆಂಟ್ಸ್ ದು ಕಥೆ ಇನ್ನು ವಿಭಿನ್ನ.  ಆದರೆ ಸಮಯ ಕಳೆದಂತೆ WFH  ಅನ್ನುವುದು ಅದರ ಪರಿಮಿತಿ, ವಿದ್ಯುತ್, ಇಂಟರ್ನೆಟ್, laptop  ಸಮಸ್ಯೆಗಳು  ಮಕ್ಕಳು, ದೊಡ್ಡವರು, ಸಣ್ಣ ಮನೆಗಳು, ಇಬ್ಬರೂ ಕೆಲಸ ಮಾಡುತ್ತಿದ್ದರೆ  ಪ್ರತ್ಯೇಕವಾಗಿ ಕುಳಿತುಕೊಳ್ಳಲೂ ಆಗದಂತ ಸನ್ನಿವೇಶ,  ಇಬರಿಗೂ ಕಾನ್ಫೆರನ್ಸೆ ಕಾಲ್ಸ್ ಇದ್ದಾರೆ ಒಬ್ಬರಿಗೊಬ್ಬರು ಮಾತಾಡುವಾಗ ಆಗುವ ತೊಂದರೆ,  ಜೊತೆಯಲ್ಲಿ ಮಕ್ಕಳ ಆನ್ಲೈನ್ ಕ್ಲಾಸೆಸ್.. ಒಂದಾ ಎರೆಡಾ… wfh  ಎಷ್ಟು ಉಪಕಾರಿಯೋ ಅಷ್ಟೇ ತನ್ನದೇ ಆದ  ದೈಹಿಕ, ಮಾನಸಿಕ ಹಾಗು ಸಾಮಾಜಿಕ ಸಮಸ್ಯೆಗಳನ್ನು ತಂದು ಹಾಕಿರುವುದು ಅಷ್ಟೇ ಸತ್ಯ. 

    ಕಳೆದ ಆರು ತಿಂಗಳಲ್ಲಿ ನಿಧಾನವಾಗಿ wfh ಕೆಲ್ಸಕ್ಕೆ ಹೊಂದಿಕೊಳ್ಳುತ್ತಾ ಸಾಗಿದ್ದ ನಮಗೆ  ಅಷ್ಟೇ ನಿಧಾನವಾಗಿ ತೀರಾ ಅಗತ್ಯ ವಿರುವವರನ್ನ ಮೊದಲಿಗೆ ಆಫೀಸ್ ಬರುವಂತೆ ಕಂಪನಿಗಳು ಹೇಳಿದವು.  ಕೋವಿಡ್-19 ನಿಯಮದಂತೆ  ಮಾಸ್ಕ್, ಸ್ಯಾನಿಟೈಝೆರ್, ಸಾಮಾಜಿಕ ಅಂತರ, ಒಂದು ಕ್ಯಾಬ್ ನಲ್ಲಿ ಕೇವಲ ಇಬ್ಬರಿಗೆ ಮಾತ್ರ ಪ್ರಯಾಣ ಮುಂತಾದ ಮುಂಜಾಗ್ರತೆ ತೆಗೆದುಕೊಂಡು ಆಫೀಸ್ ಪ್ರಾರಂಭ ಮಾಡಿದವು.  ಅದರಂತೆ ಆರುತಿಂಗಳ ನಂತರ ಆಫೀಸ್ ಹೋದಾಗ ಆದ ಅನುಭವವೂ ವಿಚಿತ್ರ , ಅದ್ಭುತ ಹಾಗು ಅವಿಸ್ಮರಣೀಯ. 

    ಬೇಸಿಗೆ ರಜೆಯ ನಂತರ ಶಾಲೆಗೆ ಹೋಗುವ ಮಕ್ಕಳಂತೆ

    ಬೇಸಿಗೆ ರಜೆಯ ನಂತರ ಶಾಲೆಗೆ ಹೋಗುವ ಮಕ್ಕಳ ಹಾಗೆ ಅಯ್ಯೋ ಆಫೀಸ್ ಹೋಗ್ಲೇ ಬೇಕಾ ಎಂದು ಅನ್ನಿಸಿದರೂ  ಅದೇನೋ ಖುಷಿ, ಅದೇನೋ ಉದ್ವೇಗ ಅದೇನೋ  ಲವಲವಿಕೆ.ಮುಂಜಾನೆ   ಬೇಗ ಎದ್ದು ವಾಕಿಂಗ್ ಮುಗ್ಸಿ ಎಂಟು ಗಂಟೆ ಹೊತ್ತಿಗೆ  ಸ್ನಾನ, ತಿಂಡಿ ಮುಗಿಸಿ,  ಬೆನ್ನಿಗೆ ಬ್ಯಾಗ್ ಹಾಕಿ, ಕೈಯಲ್ಲಿ ಊಟದ ಬಾಕ್ಸ್ ಹಿಡಿದುಕೊಂಡು ನೀಟಾಗಿ ಪಾಲಿಶ್  ಮಾಡಿದ ಬೂಟು ಹಾಕಿಕೊಂಡು ಮೊಬೈಲ್ ನಲ್ಲಿ ಕ್ಯಾಬ್  ಲೊಕೇಶನ್ ಟ್ರ್ಯಾಕ್ ಮಾಡುತ್ತಾ,  ಕ್ಯಾಬ್ ಬರೋದು ಐದು ನಿಮಿಷ ತಡವಾದರೂ ಒಂದು ಘಂಟೆ ಕಳೆದಂತೆ ಭಾಸವಾಗಿತ್ತು.   ಅಂತೂ ಕ್ಯಾಬ್ ಮನೆ ಮುಂದೆ  ಬಂದತಕ್ಷಣ  ಒಳಹೋಗಿ ಕುಳಿತು ಹೊರಗೆ ನಿಂತಿದ್ದ ಅಪ್ಪ ಅಮ್ಮ ಹೆಂಡತಿ ಮಕ್ಕಳು ಎಲ್ಲರಿಗೂ ಬಾಯ್ ಹೇಳಿದ್ದು ಮೊದಲನೆಯ ಅನುಭವ ಎನ್ನಬಹುದು.  ಹೀಗೆ ಯಾವತ್ತೂ ಎಲ್ಲರೂ ನಿಂತು ಆಫೀಸ್ ಗೆ ಬೀಳ್ಕೊಟ್ಟಿರಲಿಲ್ಲ. 

    ಕ್ಯಾಬ್ ಒಳಗೂ ಪ್ಲಾಸ್ಟಿಕ್ ಪರಧಿ ಬಂದಿತ್ತು, ಕ್ಯಾಬ್ ಡ್ರೈವರ್ ಹತ್ತಿರ ಮಾತಾಡುತ್ತಾ ಮುಂಚೆ ಒಂದು ಕ್ಯಾಬ್ ನಲ್ಲಿ 4 ಜನ ಮಾತಾಡುತ್ತಾ  ಹೋಗುತ್ತಿದ್ದೆವು ಆದರೆ ಈಗ ಇಬ್ಬರು ಅದು ಪರಧಿಯ ಆಚೆ.  ಹಾಗೆ ಟ್ರಾಫಿಕ್ ದಾಟಿ ಆಫೀಸ್ ಹೋಗೋದ್ರಲ್ಲಿ ತಡ ಆಗಬಹುದು ಅಂದುಕೊಂಡಿದ್ದೆ! ಆದರೆ ಕೋವಿಡ್ ಎಫೆಕ್ಟ್ ನಿಂದ ಆಶ್ಚರ್ಯ ರೀತಿಯಲ್ಲಿ ಸಿಲ್ಕ್ ಬೋರ್ಡ್ ಖಾಲಿ ಖಾಲಿ!   ಒಂದುವರೆ ಘಂಟೆ ತೆಗೆದುಕೊಳ್ಳುತ್ತಿದ್ದ ಸಮಯ ಕೇವಲ ಮೂವತ್ತು ನಿಮಿಷದಲ್ಲಿ ಆಫೀಸ್ ಸೇರಿದ್ದು ವಿಶೇಷವಾಗಿತ್ತು.  

    ಆಫೀಸ್ ಗೇಟ್ ಹತ್ತಿರ ಹೋದಾಗ, ಎಲ್ಲವೂ ಏನೋ ಹೊಸದು ಎನ್ನೋ ಭಾವನೆ.  ಆಫೀಸ್ ಕ್ಯಾಂಪಸ್ ನಲ್ಲಿ ಹಾಕಿದ್ದ ಗಿಡಗಳೆಲ್ಲ ಹೇರಳವಾಗಿ ಬೆಳದು ಹೂವು ಬಿಟ್ಟಿದ್ದವು, ಲಾಗಿನ್ ಗೆ ಇನ್ನು ಮೂವತ್ತು ನಿಮಿಷ ಬಾಕಿ ಇದ್ದ ಕಾರಣ ಹಾಗೆ ಕ್ಯಾಂಪಸ್ ಒಂದು ಸುತ್ತು ಹಾಕಿ ಬರುವಾ ಎಂದು ಹೋದಾಗ,  ಹುಲ್ಲು ಹಾಸಿನ ಮಧ್ಯ ಇದ್ದ ಕಾಲು ದಾರಿ ಕಾಣೆಯಾಗಿ ಹುಲ್ಲು ಹೇರಳವಾಗಿ ಹಸಿರಾಗಿ ಬೆಳೆದಿತ್ತು.  ದೂರದಲ್ಲಿದ್ದ ಕಾರಂಜಿ ಅದರ ಸುತ್ತಲೂ ನೀಟಾಗಿ ಕಟ್ ಮಾಡಿದ ಗಿಡಗಳಿಂದ ಕಂಗೊಳಿಸುತ್ತಿತ್ತು. ಯಾವುದೊ ಹೊಸಾ ಕೆಲ್ಸಕ್ಕೆ ಸೇರಿದಾಗ ಹೊಸಾ ಆಫೀಸ್ ಹೋದಂಥ ,  ಬೇರೆ ದೇಶದಲ್ಲಿ ಇರುವ ಆಫೀಸ್ ಹೋದಂಥ  ಅನುಭವ.  ಮುಂದೆ  ಹಾಗೆ ಗೆಳೆಯರೆಲ್ಲಾ ಕುಳಿತುಕೊಳ್ಳುವ ಬೆಂಚ್, ಆಟದ ಮೈದಾನ ಎಲ್ಲವೂ ಏನೋ ನವ ನವೀನ ರೀತಿಯಲ್ಲಿ ಹೊಸ ಉಡುಗೆ ಉಟ್ಟು ನಿಂತಂತೆ ನಿಮಗಾಗಿ ಕಾಯುತ್ತಿದ್ದೇವೆ ಎನ್ನುವಂತೆ ನನ್ನನ್ನೇ ನೋಡುತ್ತಿರುವಂತೆ ಅನ್ನಿಸಿತು. 

    ತಾನೇ ತೆರೆವ ಬಾಗಿಲು

    ಗಾಜಿನ ಬಾಗಿಲು ತನ್ನನ್ನು ತಾನೇ ತೆಗೆದು ಒಳಬರುವಂತೆ ಸ್ವಾಗತಿಸಿತು, ಒಳ ಹೋಗಿ ಲಿಫ್ಟ್ ಹತ್ತಿರವೂ ಖಾಲಿ ಖಾಲಿ, ಲಿಫ್ಟ್ ಒಳಗೆ ಹೋಗಿ ನನ್ನ ಮಹಡಿಯ ಬಟನ್ ಒತ್ತಿ ನಿಂತುಕೊಂಡಾಗಲೂ ಒಳಗಿದ್ದಿದ್ದು ಕೇವಲ ಇಬ್ಬರು.  ಆಫೀಸ್ ನಲ್ಲಿ ಗೊತ್ತಿರುವವರನ್ನ ಮಾತ್ರ ಮಾತನಾಡಿಸುತ್ತಿದ್ದ ನಾನು, ಇಂದು ಲಿಫ್ಟ್ ನಲ್ಲಿ  ಪರಿಚಯವಿಲ್ಲದಿದ್ದರು ಮೊದಲನೇ ಸಾರಿ  ಹಾಯ್  ಹೇಳಿ ನನ್ನ ಐದನೇ ಮಹಡಿ  ಬಂದ ತಕ್ಷಣ ಹೊರಬಂದಾಗ ಅಲ್ಲಿಯೂ ಆಶ್ಚರ್ಯ,  ಫ್ರಂಟ್ ಡೆಸ್ಕ್ ಹೂಗಳಿಂದ ಕಂಗೊಳಿಸುತ್ತಿತ್ತು , ಯಾವಾಗಲೂ ಜನ ಜಂಗುಳಿ ಇದ್ದ ಸೋಫಾ ಚೇರ್ ನ್ಯೂಸ್ ಪೇಪರ್ಸ್ ಎಲ್ಲವೂ ಖಾಲಿ.   ರಿಸೆಪ್ಶನಿಸ್ಚ್ ಗೂ ಒಂದು hi  ಹೇಳಿ, ನನ್ನ id  ಸ್ಕಾನ್  ಮಾಡಿ, ತೆರೆದ ಬಾಗಿಲ ಒಳಗೆ ಹೋಗಿ ನನ್ನ ಡೆಸ್ಕ್ ಹತ್ತಿರ  ಹೋಗುತ್ತಿರುವಾಗ ಅದೇನೋ ಪುಳಕ. 

    ಇಡೀ ಫ್ಲೋರ್  ವಿಭಿನ್ನ

    ಐಟಿ ಕಂಪೆನಿಗಳಲ್ಲಿ ಮುಂಚೆ ಇಂದಲೂ ಹೌಸ್ ಕೀಪಿಂಗ್ ಸ್ಟಾಫ್ ದಿನವೂ ನೀಟಾಗಿ ಆಫೀಸ್ ಡೆಸ್ಕ್ ಇಡುತ್ತಿದ್ದುದು ಇತ್ತಾದರೂ, ಇವತ್ತು ಅದೇನೋ ಇಡೀ ಫ್ಲೋರ್  ವಿಭಿನ್ನವಾಗಿ ಕಾಣಿಸುತ್ತಿತ್ತು. ನಮ್ಮ ನಮ್ಮ ಡೆಸ್ಕ್ ಗಳ ಮೇಲೆ ನಾವು ಬೆಳೆಸುತ್ತಿದ್ದ ಚಿಕ್ಕ ಚಿಕ್ಕ ಗಿಡಗಳು, ಬಳ್ಳಿಗಳು ಎತ್ತರ ಹಾಗು ಉದ್ದ ಉದ್ದ ಬೆಳೆದಿದ್ದವು.  ನಾವು ಆಫೀಸ್  ಬರದಿದ್ದರೂ ಹೌಸ್ ಕೀಪಿಂಗ್ ನವ್ರು ಎಲ್ಲಾ ಗಿಡ ಗಳನ್ನ ಚನ್ನಾಗಿ ನೀರೆರೆದು ಬೆಳೆಸಿದ್ದರು.  ಅಲ್ಲಲ್ಲಿ ಹಲವು ಬಳ್ಳಿಗಳಲ್ಲಿ ವಿವಿಧ ಬಣ್ಣದ ಹೂಗಳು ನಮ್ಮನ್ನ ಸ್ವಾಗತಿಸುವಂತೆ ಕಂಗೊಳಿಸುತ್ತಿದ್ದವು. ಹಾಗೆ ಮುಂದೆ ಸಾಗಿ ನನ್ನ ಡೆಸ್ಕ್ ಹತ್ತಿರ ಬಂದಾಗ ಆರು ತಿಂಗಳ ನಂತರ ಕೂಡಾ ಅಲ್ಲಿದ್ದ  ವಸ್ತುಗಳು ನನಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದಂತಿತ್ತು.   

    ನಾಲ್ಕು ಜನ ಕೂಡುತ್ತಿದ್ದ ಜಾಗದಲ್ಲಿ ಕೇವಲ ಇಬ್ಬರು ಕೂಡುವಂತೆ ವ್ಯವಸ್ಥೆ ಜೊತೆಗೆ  ಪ್ರತಿ ಡೆಸ್ಕ್ ಗೆ, ಪ್ರತಿ ಬಾಗಿಲಿಗೆ ಸ್ಯಾನಿಟೈಸರ್, ಮಾಸ್ಕ್ ಇಟ್ಟಿದ್ದರು, ಕುಳಿತುಕೊಳ್ಳುವ ಚೇರ್ ಗಳಲ್ಲಿ ಉಪಯೋಗಿಸಿ ಎಸೆಯಬಹುದಾದ ತೆಳು ಬಟ್ಟೆ ಹಾಸಿದ್ದರು.   

    ಒಮ್ಮೆ ಸುತ್ತಲೂ ಕಣ್ಣಾಡಿಸಿದಾಗ   ಒಬ್ಬೊಬ್ಬ ಗೆಳೆಯರು ಒಂದು ಒಂದು ಶೈಲಿಯಲ್ಲಿ ಬಂದಿದ್ದರು.  ಆರು ತಿಂಗಳು ಗಡ್ಡ ಕೂದಲು  ಬೆಳೆಸಿದ್ದ ಒಬ್ಬರು ನನ್ನ ಮ್ಯಾನೇಜರ್ ಎಂದು ಗುರುತು ಸಿಗದಷ್ಟು ಮುಖ ಚರ್ಯ ಬದಲಾಗಿತ್ತು!  ಮತ್ತೊಬ್ಬರು ಫುಲ್ ಬಾಲ್ಡ್! ಮಗದೊಬ್ಬರು ತಮ್ಮ ಕೂದಲಿಗೆ ಹಾಕುತ್ತಿದ್ದ ಡೈ ನಿಲ್ಲಿಸಿದ್ದಾಕ್ಕಾಗಿ ಪೂರ್ತಿ ಬಿಳಿ ತಲೆ!. ಮೀಸೆ ತೆಗೆದವರೆಷ್ಟೋ!  ಜೊತೆಗೆ ಆರುತಿಂಗಳಿಂದ ಮೇಕಪ್ ಮಾಡುವುದು ಬಿಟ್ಟಿದ್ದ ಒಬ್ಬ ಮಹಿಳಾ ಸಿಬ್ಬಂದಿ  ಯಾರು ಎಂದು ಕಂಡು ಹಿಡಿದವರಿಗೆ ಬಹುಮಾನ ಎಂಬ ಫಲಕ ಬೇರೆ ಹಾಕಿಕೊಂಡಿದ್ದರು.  ಹೇಗೆ ಹೇಳುತ್ತಾ ಹೋದರೆ ಮುಗಿಯದ ಕಥೆ. ಅದಕ್ಕಿಂತ ಬೇಸರದ ಸಂಗತಿ ಎಂದರೆ,  ಗೆಳೆಯರು ಒಂದಿಬ್ಬರು ಕರೋನಾದಿಂದ ಪ್ರಾಣ ಕಳೆದುಕೊಂಡಿದ್ದರು, ಅವರ ಡೆಸ್ಕ್ ಗಳಲ್ಲಿ ಅವರ ಫೋಟೋ ಹಾಗು ಶ್ರದ್ಧಾಂಜಲಿ ಫಲಕಗಳು ಕರೋನಾದ ಕರಾಳ ಛಾಯೆ ತೋರಿಸುತ್ತಿತ್ತು. 

    ತುಂಬಾ ದಿನಗಳ ನಂತರ ಭೇಟಿ ಆಗಿದ್ದರು, ಸಾಮಾಜಿಕ ಅಂತರ ಕಾಯ್ದುಕೊಂಡು ದೂರದಿಂದಲೇ ಶೇಕ್ ಹ್ಯಾಂಡ್ ಬದಲು ಭಾರತೀಯರಂತೆ ನಮಸ್ಕರಿಸಿ  ಶುಭಾಶಯಗಳನ್ನು ಹಂಚಿಕೊಂಡು ಎಲ್ಲರೂ ಕಾಫೀ ಕುಡಿಯಲು ಹೋದೆವು.  ಫುಡ್ ಕೋರ್ಟ್ ಗಳಲ್ಲಿ ಕೂಡ ಸಾಮಾಜಿಕ ಅಂತರ, ಪೇಪರ್ ಕಪ್ಸ್ ನಲ್ಲಿ ಕಾಫೀ, ಒಂದು ಟೇಬಲ್ ಗೆ ಇಬ್ಬರು ಕೂಡುವಂತೆ ಮಾತ್ರ ವ್ಯವಸ್ಥೆ!.  ಮಾಸ್ಕ ತೆಗೆದು ಕಾಫೀ ಕುಡಿಯುವುದು ಹೇಗೆ ಎಂಬ ಚರ್ಚೆ ಇಂದ ಶುರುವಾಗಿದ್ದು ಕಳೆದ ಆರುತಿಂಗಳಲ್ಲಿ  WFH ಮನೆ, ಹೆಂಡತಿ ಮಕ್ಕಳು, ಪಾರ್ಟಿ, ಆಫೀಸ್ ಇವೆಂಟ್ಸ್ , ಔಟಿಂಗ್ಸ್,  onsight ಟ್ರಿಪ್ಸ್, ಹಾಗು TGIF ಡ್ರಿಂಕ್ಸ್ ಹಾಗು birthday ಪಾರ್ಟಿ ಗಳನ್ನ ಮಿಸ್ ಮಾಡಿಕೊಂಡಿದ್ದು,  ಒಬ್ಬಬ್ಬರದು ಒಂದೊಂದು ಅನುಭವ ಹೇಳುತ್ತಾ ಹೋದರು. 

    ಬೆಂಗಳೂರು ಬಿಟ್ಟವರೆಷ್ಟೋ, ಇಲ್ಲೇ ಇದ್ದು ಎಲ್ಲೂ ಹೋಗಲಾಗದೆ ನರಳಾಡಿದವರು,  ಅಪ್ಪ ಅಮ್ಮ ಒಂದು ಕಡೆ, ಲಾಕ್ ನಾವು ಇನ್ನೊಂದು ಕಡೆ ಲಾಕ್ ಆಗಿದ್ದು  ಹೇಗೆ  ಕೊನೆಯಿಲ್ಲದ ಅನುಭವಗಳ ಹಂಚಿಕೆ ಮಧ್ಯೆ, ಈ ಕರೋನ ಭೀತಿ ನಡುವೆ ಆಫೀಸ್ ಬರುವಾಗ ಮನೆಯಲ್ಲಿ ಹೆಂಡತಿ, ತಾಯಿ, ಗಂಡ, ಮಕ್ಕಳು ಕೊಟ್ಟ ಸಲಹೆಗಳನ್ನ ಪಾಲಿಸುವ ಅನಿವಾರ್ಯತೆಯನ್ನು ಹೇಳುತ್ತಾ ಕೊನೆಗೂ ಅರ್ಧ ದಿನ ಕಳೆದಿದ್ದು ಗೊತ್ತಾಗಲೇ ಇಲ್ಲ.   ಉತ್ತರಾರ್ಧ ಮಾಮೂಲಿನಂತೆ ಕೆಲಸದಲ್ಲಿ ಮುಳುಗಿ ಹೋಗಿದ್ದು.. ಮತ್ತೆ ಅದೇ ಜೀವನ ಅದೇ ಕೆಲಸದ ಚಕ್ರ ಎನ್ನುವಂತೆ ಇದ್ದರೂ,  ಈಗ ಆದ ಬದಲಾವಣೆ ಲೈಫ್ ಟೈಮ್ ನಲ್ಲಿ ಒಮ್ಮೆ  ಮಾತ್ರ ಸಾಧ್ಯ ಎಂದೆನಿಸಿತು.  ಏನೇ ಇರಲಿ ಈ ರೀತಿಯ ಬ್ರೇಕ್ ಪ್ರತಿಯೊಬ್ಬ ಜನರಿಗೆ ಬೇಕಿತ್ತೇನೋ!  ಪ್ರಪಂಚದ ಭಾರ ಕಡಿಮೆ ಆಗಬೇಕಿತ್ತೇನೋ.  ಸಮಯದ ಪರಿವಿಲ್ಲದೆ ಓಡುತ್ತಿದ್ದವರಿಗೆ, ಹಣವೇ ಮುಖ್ಯವಾಗಿದ್ದವರಿಗೆ, ಪಾರ್ಟಿಗಳಲ್ಲಿ ತಲ್ಲೀನರಾಗಿದ್ದವರಿಗೆ  ಇದ್ದಕ್ಕಿದ್ದ ಹಾಗೆ ಒಂದು ದೊಡ್ಡ ಬ್ರೇಕ್! ಹಾಕಿ ಜೀವನದ, ಜೀವದ ಮೌಲ್ಯ ತಿಳಿಸಿದ್ದು, ಇದು ಕರೋನದಿಂದ ಮಾತ್ರ ಸಾಧ್ಯವಾಯಿತು  ಮುಂದೆ ಮಾಡುವ ಕೆಲಸದ ರೀತಿಗೆ,  ಹೊಸಾ  ಪರಿಕಲ್ಪನೆ ಯೊಂದಿಗೆ IT  ಕೆಲಸ ಮಾಡಲು ಇಂದಿನಿಂದಲೇ ನಾಂದಿ ಪೂಜೆ ಮಾಡಿದಂತಿತ್ತು. 

    ಕಿರಣ್ ಮಾಡಾಳು

    ಇಲ್ಲಿ ಪ್ರಕಟವಾಗಿರುವ ಚಿತ್ರ ರಚಿಸಿದವರು ಕಿರಣ್ ಮಾಡಾಳು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ.ಇಲ್ ಸ್ಚ್ರೇಷನ್, ವ್ಯಂಗ್ಯ ಚಿತ್ರ , ಕಂಪ್ಯೂಟರ್ ಗ್ರಾಫಿಕ್ಸ್ ಎಲ್ಲದರಲ್ಲೂ ಅವರಿಗೆ ಪರಿಣತಿ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

    ಪ್ರಭಂಜನ ಮುತ್ತಿಗಿ
    ಪ್ರಭಂಜನ ಮುತ್ತಿಗಿ
    ವೃತ್ತಿಯಿಂದ ಸಾಫ್ಟ್ ವೇರ್ ಎಂಜಿನಿಯರ್., ಶಾಲೆಗೆ ಹೋಗುವ ದಿನದಿಂದಲೂ ಕನ್ನಡದಲ್ಲಿ ಬರೆಯುವದು ಹವ್ಯಾಸ. ಕಥೆ  ,ಕವನ , ನಾಟಕಗಳನ್ನೂ ಬರೆದಿದ್ದಾರೆ. ಹವ್ಯಾಸಿ ಅಂಕಣಕಾರರಾಗಿ ಗುರುತಿಸಿಕೊಂಡಿದ್ದಾರೆ. 
    spot_img

    More articles

    10 COMMENTS

    1. ಖುಷಿಯಾದ ಓದು.ಎಲ್ಲೆಲ್ಲಾ ಮನುಷ್ಯನ ಹಸ್ತಕ್ಷೇಪ ಕ್ಷೀಣಿಸುತ್ತದೋ ಅಲ್ಲಿ ಪ್ರಕೃತಿ ಪಲ್ಲವಿಸಲಾರಂಬಿಸುತ್ತದೆ.ನಿಮ್ಮ ಆಫೀಸಿನ ಒಳಾಂಗಣ ಮತ್ತು ಹೊರಾಂಗಣ ದ ಫೋಟೋಗಳನ್ನು ಸೇರಿಸಿದ್ರೆ ಇನ್ನಷ್ಟು ಚಂದವಾಗ್ತಿತ್ತು‌.

      ಮನುಷ್ಯ ಸಂಘ ಜೀವಿ. ಜೊತೆಗೆ ಸದಾ ಹೊಸದನ್ನು ಅಪೇಕ್ಷಿಸುವವನು.ಮನೆಯಿಂದ ಕೆಲಸವಾಗಿರಬಹುದು ತರಗತಿಗಳಾಗಿರಬಹುದು .ಮನುಷ್ಯನ ಮುಖ್ಯ ಸ್ವಭಾವವಾದ ಹೊಂದಾಣಿಕೆಯನ್ನು ಕಲಿಸಲಾರದು.

    2. ವಾಸ್ತವತೆಯನ್ನು ತೆರೆದಿಟ್ಟ
      ಬರಹ ಮತ್ತು ಚಿತ್ರ
      ಮುದ ನೀಡಿದವು.

    LEAVE A REPLY

    Please enter your comment!
    Please enter your name here

    Latest article

    error: Content is protected !!