ಕರೋನ ವೈರಸ್ ಹಾವಳಿ ಪ್ರಾರಂಭವಾದಾಗಿನಿಂದ ದೇಶ ಹಾಗು ಪ್ರಪಂಚದಲ್ಲಿ ಹಲವಾರು ಉದ್ಯಮಗಳು ತಾವು ನಿರ್ವಹಿಸುವ ರೀತಿ, ಕೆಲಸ ಮಾಡುವ ರೀತಿ ಯಲ್ಲಿ ಬದಲಾವಣೆ ಕಂಡುಕೊಂಡಿರುವುದು ಹಾಗು ಕಂಡುಕೊಳ್ಳುತ್ತಿರುವುದು, “change is constant” ಎನ್ನುವುದು ಸಾರ್ವಕಾಲಿಕ ಸತ್ಯ ಎಂಬುದನ್ನು ಸಾಬೀತು ಪಡಿಸುತ್ತಿದೆ.
ಯಾವುದೇ ಯೋಜನೆ ಕಾರ್ಯಸಾಧುವಾಗಬೇಕಾದರೆ ಆ ಯೋಜನೆಯ ಉದ್ದೇಶ ಹಾಗು ಆ ಉದ್ದೇಶ ನೆರವೇರಲು ಬರುವ ವಿಘ್ನಗಳನ್ನು ಎದುರಿಸುವುದು ಹಾಗು ನಿವಾರಿಸುವುದು ಅನಿವಾರ್ಯ. ಕೆಲವೊಂದು ಅಪಾಯಗಳನ್ನು ಮುಂಚೆಯೇ ಕಂಡುಹಿಡಿದು ಆ ಅಪಾಯಗಳನ್ನು ಹೇಗೆ ನಿರ್ವಹಿಸಬೇಕೆಂದು ಎಂಬುದನ್ನು “Project Manegement” ತಿಳಿಸಿಕೊಡುತ್ತದೆ. ಆದರೆ ಅನೀರಿಕ್ಷಿತ ಅಪಾಯ ಬಂದಾಗ ಅದನ್ನು ಸಕಾರಾತ್ಮಕ ಅವಕಾಶಗಳನ್ನಾಗಿ ಪರಿವರ್ತಿಸಿ ಮುಂದುವರಿಯುವ ಕಂಪನಿಗಳು ಕೊನೆಗೆ ತಮ್ಮ ಯೋಜನೆಯನ್ನು ಯೆಶಸ್ವಿಯಾಗಿ ಪೂರೈಸುತ್ತವೆ. ಅಂತಹದೇ ಪರಿಸ್ಥಿತಿ ಕಳೆದ ಆರು ತಿಂಗಳಿಂದ ನಾವು ನೋಡುತ್ತಿದ್ದೇವೆ.
ವರ್ಕ್ ಫ್ರಮ್ ಹೋಮ್ ಗೆ ಮಾನ್ಯತೆ
ತಾಂತ್ರಿಕತೆ ಬೆಳೆದ ಮೇಲೆ ಹಲವಾರು ಕೆಲಸಗಳನ್ನು ಮನೆ ಇಂದ ಕೆಲಸ ಮಾಡುವ ಪರಿಪಾಠ ಕಳೆದ ದಶಕದಿಂದ ಚಾಲ್ತಿಯಲ್ಲಿದ್ದರೂ ಈಗ ಅದು ನಿಜವಾಗಿದೆ. ಅದರಲ್ಲೂ IT ಹಾಗು BPO ಕಂಪನಿಗಳು ತನ್ನ ಕೆಲಸಗಾರರಿಗೆ ಇರುವಲ್ಲಿಂದಲ್ಲೇ ಕೆಲಸ ಮಾಡುವ ಅವಕಾಶಗಳನ್ನು ಕೊಡುತ್ತಿದೆ. ಜೊತೆಗೆ ಅದಕ್ಕೆ ಬೇಕಾದ ಅನುಕೂಲತೆಗಳನ್ನು ಮಾಡುತ್ತಿದೆ. ಆದರೆ ಈ ರೀತಿ ಮಾಡುವ ಕೆಲಸಕ್ಕೆ ಸರ್ಕಾರದಿಂದ ಮಾನ್ಯತೆ ಇಲ್ಲಿವರೆಗೆ ಇರಲಿಲ್ಲ. ಈಗ ಆ ಮಾನ್ಯತೆ ಕೊಡುವ ಕೆಲಸವನ್ನು ಭಾರತ ಸರ್ಕಾರ ಮಾಡಿದೆ.
ಭಾರತ ಸರ್ಕಾರದಿಂದ IT, BT ಹಾಗು BPO ಕಂಪನಿಗಳಿಗೆ ಸಂಬಂಧಿಸಿದಂತೆ ಹೊಸ ಸರಳೀಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅದರನ್ವಯ “ಮನೆಯಿಂದ ಕೆಲಸ” ಮತ್ತು “ಎಲ್ಲಿಂದಲಾದರೂ ಕೆಲಸ ಮಾಡಲು” ಉದ್ಯೋಗ ನೀತಿಯಲ್ಲಿ ಬದಲಾವಣೆ ತಂದಿದೆ. ಈ ಬದಲಾವಣೆ IT, BT ಹಾಗು BPO ಕಂಪನಿಗಳಿಗೆ ಅನುಕೂಲವಾಗುವುದರ ಜೊತೆಗೆ, ಉದ್ಯೋಗಿಗಳಿಗೆ ಸ್ನೇಹಪರ ಆಡಳಿತವನ್ನು ಸೃಷ್ಟಿಸುತ್ತದೆ ಅದು ಮುಂದೆ ಲಾಭದಾಯಕವಾಗಿಯೂ ಪರಿಣಾಮ ಬೀರಲಿದೆ ಎಂದು ಭಾವಿಸಲಾಗಿದೆ.
COVID-19 ಐಟಿ / ಬಿಪಿಓ ಸಂಸ್ಥೆಗಳನ್ನು ನೌಕರರನ್ನು ಮನೆಯಿಂದ ಕೆಲಸ ಮಾಡಲು ಅನುವು ಮಾಡಿಕೊಡುವ ಈ ನೀತಿ ವಿಶೇಷವಾಗಿ ಪ್ರಸ್ತುತವಾಗಿದೆ. ಅದಕ್ಕೆ ತಕ್ಕುದಾದ ಕೆಲಸದ ಸಮಯ, ನಿರ್ವಹಣೆ, ಸಂಬಳ, ಇತ್ಯಾದಿ ಗಳನ್ನೂ ಹೇಗೆ ನಿರ್ವಹಿಸಬೇಕು ಎಂಬ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇದರಿಂದ ಉದ್ಯೋಗಿಗಳಿಗೂ ಉದ್ಯೋಗದಾತರಿಗೂ ಅನುಕೂಲವಾಗಲಿದೆ.
ಈ ಮಾರ್ಗಸೂಚಿಗಳು ಒಎಸ್ಪಿಗಳು ಅಪ್ಲಿಕೇಶನ್ ಸೇವೆಗಳು, ಐಟಿ-ಶಕ್ತಗೊಂಡ ಸೇವೆಗಳು ಅಥವಾ ಟೆಲಿಕಾಂ ಸಂಪನ್ಮೂಲಗಳನ್ನು ಬಳಸಿಕೊಂಡು ಯಾವುದೇ ರೀತಿಯ ಹೊರಗುತ್ತಿಗೆ ಸೇವೆಗಳನ್ನು ಒದಗಿಸುವ ಘಟಕಗಳಾದ, ಬಿಪಿಓಗಳು, ಕೆಪಿಒಗಳು (ಜ್ಞಾನ ಪ್ರಕ್ರಿಯೆ ಹೊರಗುತ್ತಿಗೆ), ಐಟಿ-ಇಎಸ್, ಕಾಲ್ ಸೆಂಟರ್ ಗಳಿಗೆ ಅನ್ವಯಿಸಲಿದೆ.
ಹೊಸ ನಿಯಮಗಳು ಐಟಿ ಆಧಾರಿತ ಉದ್ಯಮಕ್ಕೆ ಬಲವಾದ ಪ್ರೋತ್ಸಾಹವನ್ನು ನೀಡುವ ಮತ್ತು ಭಾರತವನ್ನು ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಐಟಿ ನ್ಯಾಯವ್ಯಾಪ್ತಿಯಲ್ಲಿ ಒಂದನ್ನಾಗಿ ಮಾಡುವ ಗುರಿಯನ್ನು ಹೊಂದಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಈ ಮಾರ್ಗ ಸೂಚಿಗಳು ಐಟಿ ಕ್ಷೇತ್ರದ ಯುವ ಪ್ರತಿಭೆಗಳನ್ನು ವಿಶೇಷವಾಗಿ ಉತ್ತೇಜಿಸುತ್ತದೆ!” ಎಂದು ಸರ್ಕಾರ ತಿಳಿಸಿದೆ.
ಎಲ್ಲಿ ಇದ್ದರೆ ಅಲ್ಲಿಂದಲೆ ಕೆಲಸ
ಸರ್ಕಾರಗಳು ನೀತಿ ರೂಪಿಸುತ್ತವೆ, ಇದರಲ್ಲಿ ಇನ್ನೂ ಒಂದು ಸಕಾರಾತ್ಮಕ ಅಂಶವನ್ನು ನಾವು ಗಮನಿಸಬೇಕಾಗಿದೆ.
ಎಲ್ಲಕ್ಕೂ ಬೆಂಗಳೂರು ಎನ್ನುವಂತಿದ್ದ ಜನರಿಗೆ ತಾವು ಇರುವ ಹಳ್ಳಿಯಲ್ಲೇ, ಮನೆಯಲ್ಲೇ ಅಥವಾ ತೋಟದ ಮನೆಯಲ್ಲಿಯೇ ಕುಳಿತು ಕೆಲಸ ಮಾಡಬಹುದಾಗಿದೆ. ದೊಡ್ಡ ಊರಿಗೆ ಬಂದು ಸಾಲ ಮಾಡಿ ಮನೆ ಮಠ ಮಾಡುವ ಬದಲು ಇರುವ ಜಾಗದಿಂದಲೇ ಕೆಲಸ ಮಾಡುವುದು ಜೊತೆಗೆ ತಂದೆ ತಾಯಿ, ಬಂಧುಗಳು, ತಮ್ಮ ಹೊಲ ಗದ್ದೆಗಳನ್ನು ಬಿಟ್ಟು ಬರುವ ಅನಿವಾರ್ಯತೆ ಇನ್ನುಮುಂದೆ ಐಟಿ ಉದ್ಯೋಗಿಗಳಿಗೆ ಬರುವುದಿಲ್ಲ.
ಇದೆಲ್ಲವೂ ಸರಿ, ಆದರೆ ಮಹಾನಗರಗಳಲ್ಲಿ ಇರುವಂತೆ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಮೊಬೈಲ್ ಇಂಟರ್ನೆಟ್ ಬಂದಿದೆ ಹೊರತು, ಇನ್ನು ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೌಲಭ್ಯ ಸಂಪೂರ್ಣವಾಗಿ ಸಿಕ್ಕಿಲ್ಲ. ಹೈ ಸ್ಪೀಡ್ ಇಂಟರ್ನೆಟ್, ನಿರಂತರ ವಿದ್ಯುತ್ ಸೇವೆ ಇಲ್ಲದೆ ಐಟಿ ಕೆಲಸಗಳನ್ನು ಹಳ್ಳಿಗಳಲ್ಲಿ ನಿರ್ವಹಿಸುವುದು ಕಷ್ಟ. ಆ ಸೌಲಭ್ಯಗಳು ದೊರೆಯಲು ಬೇಕಾದ ಮೂಲಸೌಕರ್ಯ ಕಲ್ಪಿಸುವುದು ರಾಜ್ಯಸರ್ಕಾರದ / ಸೇವೆ ಒದಗಿಸುವ ಕೆಲಸ. ಅಲ್ಲಿಯೂ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಗಳು ಹೆಚ್ಚು ಇರುವುದು ಕಾಣುತ್ತದೆ.
ಒಟ್ಟಿನಲ್ಲಿ ಈ ಹೊಸ ನಿಯಮಗಳು ನಮಗೆ ಹೆಚ್ಚು ಹೆಚ್ಚು ಉಪಯೋಗವಾಗಲಿ, ಹಳ್ಳಿಗಳಲ್ಲಿ ಪಾಳುಬಿದ್ದ ಜಮೀನಿನಲ್ಲಿ ಮತ್ತೆ ಹಸಿರು ಕ್ರಾಂತಿ ಮೂಡಲಿ, ಹಳೆ ಮನೆಗಳು ನವೀಕರಣ ಗೊಂಡು, ವೃದ್ಧರ ಗೂಡಾಗಿದ್ದ ನಮ್ಮ ಹಳ್ಳಿಗಳಲ್ಲಿ ಹೊಸ ರಕ್ತದ ಹುಡುಗರು ಕೈಯಲ್ಲಿ ಲ್ಯಾಪ್ ಟಾಪ್ ತೆಗೆದುಕೊಂಡು ಜಗಲಿ, ಕಟ್ಟೆ, ಹೊಲಗಳಲ್ಲಿ ಕುಳಿತು “ಹೇಯ್ ವಾಟ್ಸ್ ದಿ ಸ್ಟೇಟಸ್” ಎನ್ನುವ ಕಾಲ ಆದಷ್ಟು ಬೇಗ ಬರುವುದು ಸಾಧ್ಯ ಎಂದು ಈ ಹೊಸ ನಿಯಮಗಳು ನಮಗೆ ತಿಳಿಸುತ್ತವೆ.
ಬಹಳ ಆಸಕ್ತಿದಾಯಕ ವಾಗಿ ಓದಿಸಿಕೊಂಡಿತು ಬರಹ.ಬದಲಾವಣೆಯೇ ಶಾಶ್ವತ ಎನ್ನುವ ಮಾತು ಮತ್ತೆ ಸತ್ಯವಾಯಿತು ನೋಡಿ.ಹಳ್ಳಿಗಳು ಝಗಮಗಗೊಳ್ಳುವ,ತಂದೆತಾಯಿಗಳು ಮಕ್ಕಳೊಂದಿಗೆ ತಮ್ಮ ವೃದ್ಧಾಪ್ಯ ಕಳೆಯುವ,ಬ್ರಾಡ್‌ಬ್ಯಾಂಡ್ ನೆಟ್ವರ್ಕ್ ಗಳಲ್ಲಿ ಮತ್ತೊಂದು ಹಂತದಲ್ಲಿ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಗಳು ಸ್ಪಷ್ಟವಾಗ್ತಿವೆ.ಆಗೋದೆಲ್ಲಾ ಒಳ್ಳೆದಕ್ಕೆ ಅಂತ ದೊಡ್ಡವರು ಹೇಳಿದ್ದು ಸತ್ಯವಾಯಿತು.
ಉತ್ತಮ ಲೇಖನ..ವಿಷಯ-ವಿಚಾರ ಚೆನ್ನಾಗಿ ನಿರೂಪಿತವಾಗಿವೆ.
Very well written 👍👌